ವೀರಭದ್ರ ಕುಣಿತ - 
	ಶೈವ ಸಂಪ್ರದಾಯಕ್ಕೆ ಸೇರಿದ ಕರ್ನಾಟಕದ ಒಂದು ಜನಪದ ಧಾರ್ಮಿಕ ವೀರನೃತ್ಯ. ಹಳೆಯ ಮೈಸೂರು ಪ್ರದೇಶದಲ್ಲಿ ಲಿಂಗಬೀರ, ಲಿಂಗಧೀರ, ಲಿಂಗದವೀರರು ಕುಣಿತವೆಂದೂ, ಉತ್ತರ ಕರ್ನಾಟಕದಲ್ಲಿ ಪುರವಂತರ ಕುಣಿತವೆಂದೂ ಜನಪ್ರಿಯವಾಗಿದೆ. ವೀರಭದ್ರನ ಕುಣಿತ, ಪುರವಂತರ ಕುಣಿತ ಎರಡೂ ಒಂದೇ ಮೂಲದವಾಗಿದ್ದರೂ ವೇಷ ಭೂಷಣ ಲಾಂಛನಗಳು ಮತ್ತು ಕುಣಿತದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಕಾಣಬಹುದು. ವೀರಶೈವ ಸಂಪ್ರದಾಯಕ್ಕೆ ಸೇರಿದವರು ವಂಶಪಾರಂಪರ್ಯವಾಗಿ ಈ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ವೀರಭದ್ರನ ಕುಣಿತ ಒಬ್ಬ ವ್ಯಕ್ತಿಯ ಕುಣಿತ; ಸಾಮೂಹಿಕ ನೃತ್ಯವಲ್ಲ. ಸಾಮೂಹಿಕ ನೃತ್ಯವನ್ನು ವೀರಗಾಸೆ ಕುಣಿತ (ನೋಡಿ- ವೀರಗಾಸೆ-ಕುಣಿತ) ಎನ್ನುತ್ತಾರೆ. ವೀರಭದ್ರನ ವೇಷಭೂಷಣಗಳು ಆಕರ್ಷಕವಾಗಿರುತ್ತವೆ. ತಲೆಗೆ ಚಮರೀಮೃಗದ ಚೌರಿ, ಎರಕದ ನೂರೊಂದು ಲಿಂಗಗಳು, ಹಣೆಗೆ ಭಸ್ಮ, ಗಂಧ, ಕುಂಕುಮಗಳ ಅಲಂಕಾರ, ಕಿವಿಗಳಿಗೆ ರುದ್ರಾಕ್ಷಿ ಸೇರಿಸಿದ ಕುಂಡಲಗಳು, ಕೊರಳಿಗೆ ರುದ್ರಾಕ್ಷಿ ಮಾಲೆ, ಎಡಭುಜಕ್ಕೆ ತಾಮ್ರ ಅಥವಾ ಹಿತ್ತಾಳೆಯಿಂದ ಮಾಡಿದ ವೀರಭದ್ರನ ಹಲಗೆ, ಎರಡು ಭುಜಗಳಿಗೆ ನಾಗಾಭರಣ, ಬಲಗೈಯಲ್ಲಿ ಹಿಡಿಯ ಭಾಗದಲ್ಲಿ ಸಣ್ಣಸಣ್ಣ ನಾಲಗೆಗಳನ್ನು ಜೋಡಿಸಿದ್ದು ಝಳಪಿಸಿದರೆ ಶಬ್ದ ಬರುವ ತೋಪಡ ಎಂದು ಕರೆಯುವ ಖಡ್ಗ, ಎಡಗೈಯಲ್ಲಿ ಮುಳ್ಳಂಬು ಎಂಬ ವಿಶೇಷವಾದ ಚಾಕು, ಸೊಂಟದ ಮಧ್ಯದಲ್ಲಿ ಕೀರ್ತಿಮುಖ, ಎರಡು ಪಕ್ಕಗಳಿಗೆ ರುಂಡಮಾಲೆ, ದಕ್ಷಬ್ರಹ್ಮನ ಶಿರಸ್ಸು, ಸರಪಳಿ, ಹೊಕ್ಕಳಗಂಟೆ, ಮಂಡಿಗಳಿಗೆ ಐದೈದು ಜಂಗುಗಳು, ಕಾಲುಗಳಿಗೆ ಕಿರುಗೆಜ್ಜೆ, ಗಗ್ಗರ ಮತ್ತು ಕಾಲ್ಬಂಧಿಗಳು, ಮೈಮೇಲೆ ಕಾವಿಯ ನಿಲುವಂಗಿ, ಕಾವಿಯ ಚಲ್ಲಣ ಅಥವಾ ಕೆಂಪು ನಿಲುವಂಗಿ ಮತ್ತು ಕೆಂಪು ಚಲ್ಲಣ ಧರಿಸುತ್ತಾರೆ. 

	ವೀರಭದ್ರನ ಕುಣಿತದಲ್ಲಿ ಓಲಗ, ತಮಟೆ ಕೆಲವು ಕಡೆಗಳಲ್ಲಿ ತಮಟೆಯ ಬದಲು ಕರಡೆ ವಾದ್ಯಗಳನ್ನು ಬಳಸುತ್ತಾರೆ. ವೀರಭದ್ರ ವೇಷಧಾರಿ ದಕ್ಷಯಾಗ, ವೀರಭದ್ರನ ಜನನ ಮತ್ತು ವೀರಭದ್ರವಿಜಯ ಮುಂತಾದವುಗಳನ್ನು ಹೇಳುತ್ತಾನೆ. ಇದಕ್ಕೆ ಖಡ್ಗ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಒಡಪು ಎಂದು ಕರೆಯುತ್ತಾರೆ. ವೀರಭದ್ರ ಖಡ್ಗಗಳನ್ನು ಹೇಳುತ್ತಾ ಕೈಗಳಲ್ಲಿರುವ ತೋಪಡ ಮತ್ತು ಚಾಕುಗಳನ್ನು ಝಳಪಿಸುತ್ತಾ ವೀರಾವೇಷದಿಂದ ವಾದ್ಯಗಳ ಗತ್ತಿಗೆ ತಕ್ಕಂತೆ ಲಯಬದ್ಧ ವಾಗಿ ವೃತ್ತಾಕಾರದಲ್ಲಿ ನರ್ತಿಸುತ್ತಾನೆ. ಆ ಸಮಯದಲ್ಲಿ ವಿಶಿಷ್ಟ ವೇಷವೇನೂ ಇಲ್ಲದ ಸಾಮಾನ್ಯ ವ್ಯಕ್ತಿಯೊಬ್ಬ ಭಲರೇ ವೀರ, ಹರೋಹರಾ ಎಂದು ಕಾಕು ಹೇಳುತ್ತ, ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ. 

	ವೀರಭದ್ರ ವೇಷ ಧರಿಸಿದವ ಉರಿಯುವ ಕರ್ಪೂರವನ್ನು ಅಂಗೈ ಹಾಗೂ ನಾಲಗೆ ಮೇಲಿಟ್ಟುಕೊಳ್ಳುವ, ನೀರು ತುಂಬಿದ ಚೊಂಬನ್ನು ಹೊತ್ತು ನೀರು ಚೆಲ್ಲದಂತೆ ಸುತ್ತಿಸುವ, ಅಕ್ಕಿ ತುಂಬಿದ ಚೊಂಬನ್ನು ಅಕ್ಕಿ ಚೆಲ್ಲದಂತೆ ತಿರುಗಿಸುವ ಚಮತ್ಕಾರಗಳನ್ನು ಮಾಡುತ್ತಾನೆ. ವಿರಳವಾಗಿ ಶಾಸ್ತ್ರಪವಾಡಗಳುಂಟು. ಪುರವಂತರು ಶಾಸ್ತ್ರ ಪವಾಡಗಳನ್ನು ಮಾಡುವುದರಲ್ಲಿ ಅಗ್ರಗಣ್ಯರು, ಕೊಂಡಹಾಯುವುದುಂಟು. ಪುರವಂತರು ಮದುವೆಯ ಸಮಯದಲ್ಲಿ ಆಚರಿಸುವ ಗುಗ್ಗಳ ಎಂಬ ಸೇವೆಯನ್ನು ಮಾಡುವಾಗ ಕಡ್ಡಾಯವಾಗಿ ಇರಲೇಬೇಕು. 

	ಮದುವೆ, ಗೃಹಪ್ರವೇಶ ಮುಂತಾದ ಶುಭ ಸಂದರ್ಭಗಳಲ್ಲಿ ವೀರಭದ್ರ ಕುಣಿತದ ಏರ್ಪಾಟಿರುತ್ತದೆ. ಹಳೆಯ ಮೈಸೂರು ಪ್ರದೇಶದಲ್ಲಿ ಅರಸುಗಳು, ವೀರಶೈವರು, ಕೆಲವು ಭಾಗಗಳಲ್ಲಿ ಒಕ್ಕಲಿಗರು, ಹಾಲುಮತ ದವರು ಮತ್ತು ಮಡಿವಾಳರೂ ವೀರಭದ್ರನನ್ನು ಬರಮಾಡಿಕೊಳ್ಳುತ್ತಾರೆ. ವೀರಭದ್ರನ ವೇಷ ಹಾಕುವಾತ ನಿಗದಿಯಾದ ದಿವಸ ಆಚರಿಸುವವರ ಮನೆಗೆ ಆಹ್ವಾನಿತನಾಗಿ ಬಂದು ಅಲ್ಲಿಯೇ ವೇಷಭೂಷಣಗಳನ್ನೂ ಲಾಂಛನಗಳನ್ನೂ ಧರಿಸಿ ಮನೆಯಿಂದ ನಡೆಮುಡಿಯ ಮೇಲೆ ಗೊತ್ತುಪಡಿಸಿರುವ ಸ್ಥಳಕ್ಕೆ (ಸಾಮಾನ್ಯವಾಗಿ ದೇವಸ್ಥಾನ) ಹೋಗುತ್ತಾನೆ. ಅಲ್ಲಿಂದ ಮನೆಗೆ ಬರುವಾಗ ನೃತ್ಯ ಮಾಡುತ್ತಾನೆ. ನೃತ್ಯ ಮುಗಿಯುವ ತನಕ ಉಪವಾಸವಿರುತ್ತಾನೆ. ಅನಂತರ ಪಡಿ, ಕಾಣಿಕೆಗಳ ಜೊತೆಗೆ ಪಂಚೆ ವಸ್ತ್ರಗಳನ್ನು ಪಡೆಯುತ್ತಾನೆ. ಇದಕ್ಕೆ ಹಲಗೆ ಜಂಪ ಎಂದು ಕರೆಯುವುದುಂಟು. ವೀರಭದ್ರ ಆವೇಶದಿಂದ ಕುಣಿದು ಮನೆಯೊಳಗಡೆ ಪ್ರವೇಶ ಮಾಡುವುದು ವಿಳಂಬವಾದರೆ ತೆಂಗಿನಕಾಯಿಯನ್ನು ವೀರಭದ್ರನ ಮುಖದಿಂದ ಇಳಿ ತೆಗೆದು ಒಡೆಯುತ್ತಾರೆ, ಆರತಿ ಬೆಳಗುತ್ತಾರೆ. ವೀರಭದ್ರ ಆವೇಶ ಭರಿತನಾಗಿ ಕುಣಿದು ಕೆಲವೊಮ್ಮೆ ಸುಸ್ತಾಗಿ ಜ್ಞಾನತಪ್ಪಿ ಬೀಳುವುದುಂಟು. ವೀರಭದ್ರನ ಕುಣಿತ ನೋಡುವವರಿಗೆ ರೋಮಾಂಚನವ ನ್ನುಂಟು ಮಾಡುತ್ತದೆ. ಈ ವೇಷ ಧರಿಸುವವರು ಸಾಮಾನ್ಯವಾಗಿ ಮಡಿಮೈಲಿಗೆ ವಿಚಾರಗಳಲ್ಲಿ ಕಟ್ಟುನಿಟ್ಟಾಗಿರುತ್ತಾರೆ. ವೀರಭದ್ರನನ್ನು ಸಂಪ್ರದಾಯ ಬದ್ಧವಾಗಿ ಬರಮಾಡಿಕೊಳ್ಳುವ ಜನ ಸಾಕ್ಷಾತ್‍ವೀರಭದ್ರನೇ ಮನೆಗೆ ಬಂದಿದ್ದಾನೆಂಬ ನಂಬಿಕೆಯಿಂದ ಆರೋಗಣೆ ನಡೆಸುತ್ತಾರೆ.	   
(ಕೆ.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ